Followers

Friday 31 August 2012

ಓ ನನ್ನ ಚಲುವೆ



ಓ ನನ್ನ ಚಲುವೆ 

ಹುಣ್ಣಿಮೆಯ ಪೂರ್ಣ ಚಂದಿರನ ಕಂಡು
ಬರಸೆಳೆದಪ್ಪುತ್ತಾ ಉಲಿದ  ನನ್ನ ಇನಿಯ..
ಓ ನನ್ನ ಚಲುವೆ ಯಾಕೆ ದೂರ ಸರಿಯುವೆ?
ನೋಡು ಆ ಚಂದಿರನ ಮೇಲೆಲ್ಲಾ  ಕಲೆಯಿದೆ
ಆದರೆ ನನ್ನರಸಿಯ ಮುಖದ ತುಂಬಾ ಕಳೆಯಿದೆ.
ತೇಲುವನಾತ ನೀಲಿ ಅಂಬರದಲ್ಲಿ
ನೀನಿರುವೆ ಎನ್ನ ಹೃದಯ ಮಂದಿರದಲ್ಲಿ.
ಎಂದಾದರೊಮ್ಮೆ ಆಗುವನಾತ ಕಡುನೀಲಿ
ನೀನ್ಯಾವಾಗಲೂ  ತೇಲುವೆ ಎನ್ನ  ಪ್ರೀತಿಯ ಸಾಗರದಲಿ.
ನಸು ನಾಚಿ ಕೆಂಪಾಗಿ ನಾನೂ ಪಿಸುಗುಟ್ಟಿದೆ..
ಇನಿಯಾ..ಆ ಚಂದಿರನ ಕಾಂತಿಗೆ ಸೂರ್ಯ ಕಾರಣ
ನನ್ನ ಕಂಗಳ ಕಾಂತಿಗೆ ನೀನೆ ಭೂಷಣ.

ಚಂದಾ / ಸವಿತಾ ಇನಾಮದಾರ್.


Wednesday 29 August 2012

ವಿರಹ..



ವಿರಹ..
ನಿನ್ನ ವಿರಹದಲ್ಲಿ ನಾ ಬಳಲಿ ಬೆಂಡಾದೆ
ನಿನ್ನಗಲಿಕೆಯ ನೋವು ಜಗವನ್ನೇ ಬದಲಾಯಿಸಿದೆ.

ತಂಗಾಳಿಯ ಮೃದು ಸ್ಪರ್ಷದಲ್ಲಿ ಆ ಆತ್ಮೀಯತೆಯಿಲ್ಲಾ,
ಅಂಗಳದ ತುಂಬೆಲ್ಲಾ ನಿನ್ನನ್ನೇ ಅರಸುತ್ತಿದೆಯಲ್ಲಾ??

ಸೂರ್ಯದೇವ ಉದಯಿಸುವಾಗ ಕೇಳುವನು ನನ್ನ
ಬರಲೇ ನಾ ಭುವಿಗೆ ಕೊಡಲಿನ್ನೊಂದು ವಿರಹದ ದಿನವನ್ನ.

ಪಕ್ಷಿಗಳ ಕಲರವದಲ್ಲಿ ಆ ಮಧುರ ಇಂಚರವಿಲ್ಲ
ಪನ್ನಾಗ ಸಂಪಿಗೆಯಲ್ಲೂ ಮೊದಲಿನ ಕಂಪಿಲ್ಲ.

ನದಿಯ ಕಲರವ ನನ್ನ ಅಣಕಿಸುತ್ತಿಹುದು  ನೋಡು
ಈ ವಿರಹ ತಾಳಲಾರೆ ನೀ ಬೇಗ ಬಂದು ಬಿಡು. 

ಚಂದಾ / ಸವಿತಾ ಇನಾಮದಾರ್.



Sunday 26 August 2012

ಮಳೆರಾಯ ….ಬಾ ಬೇಗ




ಮಳೆರಾಯ ….ಬಾ ಬೇಗ
ಮಳೆರಾಯ ಬಾ ಬೇಗ ಸುರಿಸು ನಿನ್ನ ಮಳೆಯ
ಒಣಗಹತ್ತಿವೆ ಕೆರೆ- ಭಾವಿ ಉಳಿಸು ನಮ್ಮ ಬೆಳೆಯ.

ನಮ್ಮಜ್ಜನ ಕಾಲದಲ್ಲಿದು ನೀರಾವರಿ ಜಮೀನು
ಈಗಾಗಿದೆ ನೋಡು ಮರಭೂಮಿಗೆ ಸಮಾನು.

ಕೆರೆ- ಭಾವಿಗೆ ಹೋಗುತ್ತಿದ್ದೆ ಒಯ್ಯಾರದಿ ನಾನು
ಒಂದು ತೊಟ್ಟು ನೀರಿಲ್ಲಾ ಎಲ್ಲಿ ಹೋಗಲಿ ಇನ್ನು?

ಮುಗಿಲೆತ್ತರ ಏರುತ್ತಿವೆ ಎಲ್ಲ ಧಾನ್ಯಗಳ ಬೆಲೆ
ಮಮ್ಮಲ ಮರುಗುತ್ತಿರುವ ಜನಕೆ ತೋರು ನಿನ್ನ ಸೆಲೆ.

ನೂರೆಂಟು ಬಿರುದುಗಳು ನಮ್ಮ ಭೂಮಾತೆಗೆ
ಎದೆ ಬಿರುದು ಕೂಗಿಹಳು ನಿನ್ನ ಹನಿ ನೀರಿಗೆ.

ಹರಿಯುತ್ತಿದ್ದವು ನದಿಗಳು ಬೆಟ್ಟ ಕಾಡುಗಳಲ್ಲಿ
ಹಿಡಿದಿಟ್ಟಹರೀಗ ಆಣೆಕಟ್ಟುಗಳಲ್ಲಿ.

ಕಾವೇರಿ ನಮ್ಮವಳು ಬೇಕು ನಮಗೆ ಯಮುನೆ,
ಬಿಡಿಸಪ್ಪ ಈ ಜಗಳ ಸುರಿ ಒಂದೇ ಸಮನೆ.

ಚಂದಾ / ಸವಿತಾ . ಇನಾಮದಾರ್.


Friday 24 August 2012

ಭ್ರೂಣ ಹತ್ಯೆ..


                                                        

  ಭ್ರೂಣ ಹತ್ಯೆ..
ನವಮಾಸ ಕಳೆಯುವುದಕ್ಕೂ ಮುನ್ನ ಅದೆಷ್ಟೋ ಬಾರಿ
ಹೆಣ್ಣೆಂದು ತಿಳಿದೊಡೆ ನಿರ್ದಯತೆಯಿಂದ
ಹೊಸ ಜಗತ್ತನ್ನೂ ನೋಡಲು  ಬಿಡದೆ
ಮಣ್ಣಲ್ಲಿ ಹೂತು ಬಿಡುವರು.
ಮಕ್ಕಳೇ ಆಗದಾದಾಗ ಮತ್ತೆ ದುಃಖಿತರಾಗಿ
ಅನಾಥಾಶ್ರಮದ ಕಟ್ಟೆ ಹತ್ತುವರು.
ವಂಶ ಬೆಳೆಯೋಕೆ ಗಂಡು ಸಂತಾನವೇ ಬೇಕೆ??
ಹೆಣ್ಣಾಗಿ ಹುಟ್ಟಲೂ ಇವರ ಅನುಮತಿ ಪಡೆಯಬೇಕೆ??

ಚಂದಾ / ಸವಿತಾ ಇನಾಮದಾರ್.

'ಅಮ್ಮಾ.. ನಂಗೆ ಬೆಣ್ಣೆ ಕೊಡು’

                                                 'ಅಮ್ಮಾ.. ನಂಗೆ ಬೆಣ್ಣೆ ಕೊಡು’

ಓಡುತ್ತ –ಓಡುತ್ತಾ ಶ್ರೀ ಕೃಷ್ಣ ಬರ್ತಾನೆ
ಅಮ್ಮಾ ನಂಗೆ ಬೆಣ್ಣೆ ಕೊಡು ಅಂತಾನೆ .
ದೇವಕಿ ಮಾತೆಯ ಮುದ್ದು ಗೋಪಾಲ
ಯಶೋಧಾ ದೇವಿಯ ಮುರಳಿ ಲೋಲ
ಗೊಲ್ಲರಿಗೆ ಬೆಣ್ಣೆ ತಿನ್ನಲು ಕೊಡ್ತಾನೆ
ಅಮ್ಮಾ ನಂಗೆ ಬೆಣ್ಣೆ ಬೇಕು ಅಂತಾನೆ .

ಕಳ್ಳನ ಹಾಗೆ ನುಗ್ಗಿ ತಿನ್ನುತ್ತಾನೆ
ಸುಳ್ಳು ಹೇಳಿ ತಪ್ಪಿಸಿ ಕೊಳ್ತಾನೆ
ಇಂತಹ ದೇವರ ದೇವ ಜಗವನ್ನೇ ಕಾಯುತ್ತಾನೆ
ಭಕ್ತರಿಗೆ ಬೆಣ್ಣೆ ಕೊಡು ಅಂತಾನೆ.

ನಂದನ ಮನೆಯ ಸುಂದರ ತರುಣಿಯರು
ನೀರು ತರಲು ಯಮುನೆಗೆ ಹೋಗುವರು,
ದಾರಿಯಲ್ಲಿ ದೇವಕಿ ನಂದ ಅಡ್ಡ ಬರುತ್ತಾನೆ
ಗೋಪಿಯರಿಗೆ ಬೆಣ್ಣೆ ಕೊಡು ಅಂತಾನೆ.

ಚಂದಾ / ಸವಿತಾ ಇನಾಮದಾರ್.

Tuesday 14 August 2012

ತಾಯೇ ಭಾರತಾಂಬೆ.


                                                              ತಾಯೇ ಭಾರತಾಂಬೆ

ತಾಯೇ ತಾಯೇ ಭಾರತಾಂಬೆ
ಧೈರ್ಯದ ವರವಾ ನೀಡೇ ಅಂಬೆ
ಅಭಯ ಹಸ್ತವ ದಯಪಾಲಿಸೆ ಅಂಬೇ.

ಹಗಲಿರುಳೆನ್ನದೆ ಹೋರಾಡಿದೆವು
ಕೊನೆಗೊಮ್ಮೆ ಸ್ವಾತಂತ್ರವ ಪಡೆದೆವು
ಇನ್ನೆಂದಿಗೂ ನಾವ್ ಅಡಿಯಾಳ್ ಆಗೆವು
ಒಗ್ಗಟ್ಟಿನಲಿ ಸೇವೆಯ ಗೈಯ್ಯುವೆವು.

ಮಳೆ ಬಂದರೂ ಸರಿ, ನೆರೆ ಬಂದರೂ ಸರಿ,
ರಾಷ್ಟ್ರ ಧ್ವಜದ ಗೌರವವನು ಕಾಯುವೆವು
ತಾಯ್ನಾಡಿಗೆಂದಿಗೂ ಕಳಂಕ ಬಾರದಂತೆ
ಉಸಿರಿರೋವರೆಗೂ ಹರುಷದಲಿ ಕಾದಾಡುವೆವು.

ಮಮತೆಯ ಮಡಿಲು ತುಂಬಿರಲಿ
ಪ್ರೀತಿಯ ಹೊನಲು ಹರಿಯುತ್ತಿರಲಿ
ತನು ಮನವೆಲ್ಲಾ ನಿನಗೆ ಅರ್ಪಿಸಿ
ರೋಷ- ದ್ವೇಷಗಳ ತ್ಯಜಿಸುವೆವು ತಾಯೇ..

ಚಂದಾ / ಸವಿತಾ ಇನಾಮದಾರ್.

Sunday 5 August 2012

ಈ ಗೆಳೆತನ..
















ಈ ಗೆಳೆತನದಲ್ಲಿ 
ಬಿಂಕ – ಬಿಗುಮಾನವಿಲ್ಲ
ಮೇಲು ಕೀಳೆಂಬ ಭಾವವಿಲ್ಲ
ಸ್ವಚ್ಛ – ಸುಂದರ ಅಂಬರದಲ್ಲಿ
ಹಾರಾಡುವ ಹಕ್ಕಿಯಂತೆ,
ಹರಿದ್ವರ್ಣ ಕಾನನದ
ಹಚ್ಚ ಹಸಿರ ವನಸಿರಿಯಂತೆ
ಪಸರಿಸಲಿ ನಮ್ಮ ಪರಿಶುಧ್ಧ ಈ ಗೆಳೆತನ.

ಚಂದಾ / ಸವಿತಾ ಇನಾಮದಾರ್.

Wednesday 1 August 2012

ರಾಕ್ಷಾ ಬಂಧನ…


ಎನ್ನ ಪ್ರೀತಿಯ ಅಣ್ಣ - ತಮ್ಮಂದಿರೆ…
ಈ ರಾಖಿಯ ಬಂಧನವು
ನಿಮಗೆ ಬಂಧನವಾಗದಿರಲಿ,
ಎನ್ನ ಹರಕೆಯಿಂದ ನಿಮ್ಮ
ಮನೆ ನಂದನವನವಾಗಲಿ.
ಇದು ಕೇವಲ ದಾರವಲ್ಲ
ನೂಲಂತೂ ಅಲ್ಲವೇ ಅಲ್ಲ,
ತಾಯ ಕರುಳ ಬಳ್ಳಿಯನ್ನು
ಹಂಚಿಕೊಂಡವನೇ ಬಲ್ಲ.

ಚಂದಾ / ಸವಿತಾ ಇನಾಮದಾರ್.