Followers

Wednesday 25 July 2012

ರಕ್ತ ದಾನ.


ರಕ್ತ ದಾನ..
‘ಕಾರ್ಗಿಲ್’’ ಎಂದಾಕ್ಷಣ ಬರೆಯುವರು ಕವನ
ಒಂದೋ ವೀರರಸದಲ್ಲಿ ಇಲ್ಲವೇ ಕರುಣಾ ರಸದಲ್ಲಿ.
ಆದರೆ ನಾ ಬರೆಯುತ್ತಿರುವೆ ಇದನು ‘ನವ ರಸಗಳಲ್ಲಿ’.

ರಕ್ತದಾನ ಮಾಡುವುದು ಎಷ್ಟೊಂದು ಸುಲಭ.
ಅದರ ಪರಿಣಾಮ ಕಾಣಸಿಗುವುದು ಅಷ್ಟೇ ದುರ್ಲಭ.
ಬಗೆಬಗೆಯ ಜನರ ರಕ್ತ ಹರಿಯಿತು ಕಾರ್ಗಿಲ್ ಸೈನಿಕರುಗಳ ನರನಾಡಿಗಳಲ್ಲಿ
ತೋರತೊಡಗಿತು ನೋಡಿ ಅದರ ಬಣ್ಣ ಅವರೆಲ್ಲರ ನಡೆ- ನುಡಿಗಳಲ್ಲಿ.

ಭಿಕ್ಷುಕನ ರಕ್ತ ಪಡೆದೊಬ್ಬ ಯೋಧ ಪಾಕಿಸ್ತಾನದ ಸೈನಿಕನ ಬೆನ್ನು ಹತ್ತಿದ,
ಆತನ ಶರಟನ್ನು ಜಗ್ಗುತ್ತಾ, ದೈನ್ಯತೆಯಿಂದ ಬೇಡಿದ,
“ನಿಮ್ಮ ಅಲ್ಲಾನ ಹೆಸರಲ್ಲಿ ದೆದೇ ಬಾಬಾ, ನಿಮ್ಮ ಮೌಲಾನ ಹೆಸರಲ್ಲಿ ದೆದೇ ಬಾಬಾ,
ನಿನ್ನ ಜೀವಾತೋ ಮುಝಕೋ ದೆದೇ , ಇಲ್ಲಾ ಈ ಜಾಗಾ ತೋ ಖಾಲೀ ಕರದೆ “
ಎಂದಾತನಿಗೆ ಗುಂಡಿಕ್ಕಿದ ಸೀದಾ ಮುನ್ನಡೆದ.

ಹೀರೋನ ರಕ್ತ ಪಡೆದೊಬ್ಬ ಯೋಧ
ರಾತ್ರಿಯ ಕಗ್ಗತ್ತಲೆಯಲ್ಲೂ ಪ್ಯಾಂಟನ್ನು ಕೊಡವಿದ, ಕ್ರಾಪನ್ನು ಸವರಿದ
‘ಮಾರ್ಚ್’ ಎಂಬ  ಧ್ವನಿ ಕೇಳಿದೊಡೆ
‘ಫೈಟ್ ಮಾಸ್ಟರ್ ಬಂದಿಲ್ಲಾ, ನನ್ನ ಡ್ಯುಪ್ ಸರಿಯಿಲ್ಲ.
ನೋ ಲೈಟ್, ಸೋ ನೋ `ಆಕ್ ಶನ್, ಈ ಫಿಲ್ಮ್ ಫ್ಲಾಪ್ ಆದ್ರೆ ನನ್ಯಾರೂ ಕೇಳೊಲ್ಲಾ"
ಎನ್ನುತ್ತಲೇ ಥಟ್ಟನೇ ಗನ್ನು ಕೆಳಗಿಟ್ಟ , ಗಾಡಿಯಲ್ಲಿ ಕುಳಿತುಬಿಟ್ಟ.

ಅಧ್ಯಾಪಕನ ರಕ್ತ ಪಡೆದೊಬ್ಬ ಯೋಧ
ಹಿಂದೆ- ಮುಂದೆ ನೋಡದೆಯೇ ಬೆಟ್ಟವನ್ನು ಹತ್ತಿದ.
ಪಾಕ್ ಸೈನಿಕರನ್ನು ನೋಡುತ್ತಲೇ ಮುಖ ಗಂಟಿಕ್ಕಿದ.
‘ಎಲೈ ಹುಡುಗರೇ, ಪುಂಡ- ಪೋಕರಿಗಳಂತೇಕೆ ಮಾಡುವಿರಿ?
ಇದು ನಿಮ್ಮ ಸರಹದ್ದಲ್ಲ, ನಿಮಗೇಕೆ ತಿಳಿದಿಲ್ಲ?
ಇತಿಹಾಸ , ಭೂಗೋಲದ ಪಾಠ ನಿಮಗೆ ಸರಿಯಾಗಿ ಕಲಿಸಿಲ್ಲ.
ಓಡುವಿರೋ ಇಲ್ಲಾ ಹತ್ತು ಸಲ ಬೆಟ್ಟ ಹತ್ತಿಳಿಯುವಿರೋ?
ಎಂದು ಗದರಿಸುತ್ತ ಅವರನ್ನೋಡಿಸಿದ.

ವಿದ್ಯಾರ್ಥಿಯ ರಕ್ತ ಪಡೆದೊಬ್ಬ ಯೋಧ
ಮಣಭಾರದ ಗನ್ನುಗಳನ್ನು ಶಾಲೆಯ ಬ್ಯಾಗಿನಂತೆ ಹೊತ್ತ.
ಚಟ-ಚಟನೇ ಬೆಟ್ಟವನ್ನು ಒಂದುಸಿರಿನಲ್ಲೇ ಹತ್ತುತ್ತಾ
ಮುಂದೆ ಸಿಕ್ಕ ಸೈನಿಕರನ್ನು ಪಟ- ಪಟನೇ ಉರುಳಿಸುತ್ತಾ
ಪುನಃ ಸರಸರನೇ ಇಳಿಯುತ್ತಲೇ ,” ಅಬ್ಬೆ, ಇದೋ ನಾನಿಂದು ಬೇಗ ಬಂದೆ’ ಎನ್ನುತ್ತಲೇ ನಸುನಕ್ಕ.

ರಾಜಕಾರಣಿಯ ರಕ್ತ ಪಡೆದೊಬ್ಬ ಯೋಧ
ಬಂದೂಕನ್ನು ಹಿಡಿಯದೇ ಕೈ ಮುಗಿದು ಹಲ್ಕಿರಿದ.
“ನನ್ನ ಅಣ್ಣ- ತಮ್ಮಂದಿರೆ, ನನ್ನ ನೆಚ್ಚಿನ ಪ್ರಜೆಗಳೇ,
 ನನ್ನ ಬಾಡಿ ಗಾರ್ಡ್ ಬರಲಿ, ನನ್ನ ಜನರೂ ಬರಲಿ,
ಮೊದಲು ಅವರಲ್ಲಿಗೆ ಹೋಗಿ ಬರಲಿ, ಆಮೇಲೆ ನಾ ಹೋಗುವೆ,
ಹೈ ಕಮಾಂಡಿಗೆ ಇಂಪ್ರೆಸ್ ಮಾಡುವೆ” ಎನ್ನುತ್ತಾ ದೊಡ್ಡ ಕಲ್ಲಿನ ಮೇಲೆ ಕುಳಿತು ಬಿಟ್ಟ.

ಹೆಣ್ಣೊಬ್ಬಳ ರಕ್ತ ಪಡೆದೊಬ್ಬ ಯೋಧ
ಹಿಂತಿರುಗಿ ನೋಡದೆಯೇ ಬೆಟ್ಟವನ್ನೇರಿದ.
“ನನ್ನ  ಗಂಡನನ್ನು ಕೊಂದವರೇ, ನನ್ನ ಕಂದನ ಕೈ ಕಡಿದವರೇ,
ನನ್ನ ನಂದನವನವನ್ನು ಧ್ವಂಸಮಾಡಿ  ನನ್ನ ಅಬಲೇ ಎಂದು ಕರೆದವರೇ,
ಬನ್ನಿ ಕುನ್ನಿಗಳೇ ಬನ್ನಿ, ನಿಮ್ಮ ನೆತ್ತರು ಹರಿಸಿ ನಮ್ಮ ಭೂಮಾತೆಗೆ  ಅಭಿಷೇಕ ಮಾಡುವೆ”
ಎಂದೆನ್ನುತ್ತಾ ಕಾಳಿಯಂತೆ ಕಾದಾಡಿ ತನ್ನ ಸೇಡನ್ನು ತೀರಿಸಿಕೊಂಡ.

ಈ ರಕ್ತದಾನದ ಪರಿಣಾಮ ಅದಲು- ಬದಲು ಆದಲ್ಲಿ
ಎಂಥ ಸನ್ನಿವೇಶ ಕಾಣಬಹುದು??
ಸೈನಿಕರಿಗೆ ಈ ರಾಜಕಾರಣಿಗಳ ರಕ್ತಕ್ಕಿಂತಲೂ
ವಿದ್ಯಾರ್ಥಿಯ ಇಲ್ಲಾ ಹೆಣ್ಣೊಬ್ಬಳ ರಕ್ತದ ಹನಿಯನ್ನು ಕೊಟ್ಟಲ್ಲಿ ದೇಶದಲ್ಲಿ
ನಾಲ್ಕು ದೇಶಭಕ್ತರಾದರೂ ಉಳಿಯಬಹುದಲ್ಲವೇ???

                  ಚಂದಾ / ಸವಿತ ಇನಾಮದಾರ್.










4 comments:

  1. ಅಕ್ಕ!!
    ಕವಿತೆಯ ವಸ್ತು ನನಗೆ ತುಂಬಾ ಹಿಡಿಸಿತು ಕವನದ ಜೊತೆಯಲ್ಲೇ ಒಂದು ನೀತಿಯ
    ಹೇಳುತ್ತಾ ಹೋದ ರೀತಿ ಅಂತ ಅದ್ಬುತವಾಗಿದೆ...
    ನಿಮ್ಮೀ ಕವಿತೆ ನನಗೆ ತುಂಬಾ ಹಿಡಿಸಿತು ...
    ವೀರರ ದಿನದ ಈ ದಿನ ನಿಮ್ಮ ಕವಿತೆ ಎಲ್ಲರಲೂ ಒಂದು ಹೊಸ ಶಕ್ತಿಯಾ ನೀಡಲಿ!
    ಮತ್ತಷ್ಟು ಸುಂದರ ಕವಿತೆಗಳನ್ನು ಬರೆಯುತ್ತಲೇ ಇರಿ ...
    ಜೈ ಹಿಂದ್ ................

    ReplyDelete
  2. ಧನ್ಯವಾದಗಳು ತಮ್ಮಾ..ಆ ವೀರರ ನೆನಪಿಗಾಗಿ ಇದೊಂದು ನನ್ನ ಕಿರುಕಾಣಿಕೆ. ಈ ಕವಿತೆಯ ವಿಷಯವೇ ಮೈ ನವಿರೇಳಿಸುವಂತಿದೆ...ಆ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ.
    ಜೈ ಹಿಂದ್... ಜೈ ಭಾರತಾಂಬೆ...

    ReplyDelete
  3. ಮೇಡಮ್, ನಿಮ್ಮ ಬ್ಲಾಗ್ ನೋಡಿದೆ. ಕವಿತೆಗಳು ಚೆನ್ನಾಗಿವೆ. "ರಕ್ತದಾನ" ಕವಿತೆಯ ವಸ್ತು ತುಂಬಾ ಇಷ್ಟವಾಯ್ತು.

    ReplyDelete
  4. ಹೃತ್ಪೂರ್ವಕ ಧನ್ಯವಾದಗಳು ಷಡಕ್ಷರಿ ಅವರೆ.

    ReplyDelete