Followers

Monday, 9 November 2020

 


ಹೂಮುತ್ತು.

ನಿನ್ನ ಕಂಗಳು ನನ್ನನೇ ಅರಿಸುತ್ತಿವೆ ಎಂದು ಕೊಂಡಿದ್ದೆ

ಆದರೆ ಅವುಗಳು ಬೇರೇನೋ ನೋಡಿ

ಅದರ ಮೋಡಿಗೆ ಬಾಗಿದಾಗ ಕೋಪಗೊಂಡೆ,

ಕಸಿವಿಸಿಗೊಂಡೆ, ಅತೀವ ವೇದನೆಗೊಳಗಾದೆ.

ನೀ ಬಾರದೇ ಹೋದರೆಂಬ ಭಯದಿ 

ನಿನ್ನನು ಅರಸುತ್ತಾ, ಎಲ್ಲೆಲ್ಲೋ ಅಲೆಯುತ್ತಾ

ಕೊನೆಗೂ ನಿನ್ನ ಬಳಿ ಬಂದು ತಲುಪಿದೆ.

ಅಲ್ಲಿಯ ದೃಶ್ಯ ನನ್ನ ಹೃದಯವರಳಿಸಿತು

ಮನ ಪುಲಕಿತಗೊಂಡಿತು.

ನಸು ನಗುಬೀರುತಿರುವ ಮಲ್ಲಿಗೆಯ ಮಾಲೆಯನು

 ಹಿಡತಾನ ಮೊಗವ ನೋಡಿ ನಾನೂ ಮೋಡಿಗೊಳಗಾದೆ.

ನನ್ನ ಪ್ರಿಯತಮನ ಕೈಸೋಕಿ ಅರಳಿನಿಂತ

ಈ ಮಲ್ಲಿಗೆಯ ಭಾಗ್ಯ ನನ್ನದಾಗಿದ್ದರೆ?

ಅದರ ಪರಿಮಳ ಅವನ ಮನದಲ್ಲಿ ತುಂಬಿದಂತೆ

ನಾನೂ ತುಂಬಿದ್ದರೆ ಎನ್ನುತ್ತಿದ್ದಂತೆಯೇ

ಚಿನ್ನಾ,

ನಿನ್ನ ಸೌಂದರ್ಯಕ್ಕೆ ಸಾಟಿ ಈ ಮಂಗಳೂರು ಮಲ್ಲಿಗೆ

ಎಂದಾಗ ಅವನ ಮೇಲೆ ಸಂಶಯಿಸಿದ್ದಕ್ಕೆ,

ನನ್ನ ಮುಂಗೋಪತನಕ್ಕೆ ಪರಿತಪಿಸಿ

ಅವನ ಸಮೀಪಕ್ಕೆ ಹೋಗಿ ಹೂಮುತ್ತನಿತ್ತೆ.

ಚಂದಾ / ಸವಿತಾ ಇನಾಮದಾರ್.