ಹ್ಯಾಗೆ ಹೇಳಲಿ ನಿನಗೆ? ನಾ ಏನೆಂದು ತಿಳಿಸಲಿ?
ಮನಸಿನಲಿ ನುಸುಳಿರುವೆ,
ಮುಂಗುರುಳ ತೀಡುತಿರುವೆ
ಮಿಂಚಿನಂತೆ ಕಂಡು ಕಾಣದಂತೆ ಮಾಯವಾಗುವೆ
ಇನಿಯಾ ಏಕೆ ಹೀಗೆ ಕಾಡುವೆ ? ಎನ್ನನ್ನೇಕೆ ನೀ ಕಾಡುವೆ??
ವಸಂತ ಋತುವಿನಲ್ಲಿ
ಹೊಸ ಚಿಗುರಿನಂತೆ
ಎನ್ನ ಮನಸು ನೋಡು
ಮತ್ತೆ ಚಿಗುರುತಿದೆ
ತಂಗಾಳಿ ಬೀಸುತ್ತ
ನಿನ್ನ ಪಿಸುಮಾತು ಸಾರುತಿದೆ
ಹಳೆಯ ನೆನಪುಗಳ ಸುರುಳಿ
ಉರುಳುತ್ತ ಬರುತಿದೆ
ಮೈಮನದಲಿ ನವರಾಗ
ಉಕ್ಕಿಹರಿಯುತಿದೆ
ನಿನ್ನ ಒಂದು ನೋಟಕ್ಕೆ
, ಆ ಮಧುರ ಸ್ಪರ್ಷಕ್ಕೆ
ಅನುದಿನವೂ ನಿನ್ನ
ಸಾಮೀಪ್ಯವನ್ನು ಬಯಸುತಿರುವೆ
ಕಾಯುತ್ತ ಕುಳಿತಿರುವೆ ಇನಿಯಾ ನೀ ಬೇಗ ಬಾರೆಯಾ??
ಚಂದಿರ ಹೇಳುತಿಹನು
ಸುಂದರ ಜೋಗುಳ
ಕಂಗಳಲ್ಲಿ ಮಿನುಗುತಿದೆ
ಹೊಳಪು ನಕ್ಷತ್ರಗಳ
ನಮ್ಮ ಕನಸು ನನಸಾಗಲೆಂದು
ಮಧುರ ಮಿಲನವಾಗಲೆಂದು
ಬೇಡಿಕೊಳ್ಳೋಣ ಬಾ
ಇನಿಯಾ ಆ ದೇವರಲ್ಲಿ
ಮತ್ತೊಮ್ಮೆ ತರುವನು ಸಂತೋಷ ನಮ್ಮ ಬಾಳಿನಲ್ಲಿ.
ಚಂದಾ
/ ಸವಿತಾ ಇನಾಮದಾರ್.